ಪಾಂಡ್ಯ -
ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಆಳುತ್ತಿದ್ದ ರಾಜವಂಶ. ಮದುರೆ, ತಿರುನೆಲ್ವೇಲಿ, ಮತ್ತು ನಂಜಿನಾಡಿನ ಒಂದು ಭಾಗ ಈ ವಂಶದ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶ. ಮದುರೆ ಈ ಅರಸರ ರಾಜಧಾನಿಯಾಗಿತ್ತು. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಪಾಂಡ್ಯರ ಉಲ್ಲೇಖವಿದೆ. ದಕ್ಷಿಣ ಭಾರತದ ಒಂದು ಭಾಗದಲ್ಲಿ ಶಾತವಾಹನರು ಅಧಿಕಾರರೂಢರಾಗಿದ್ದಾಗ ಚೇರ, ಚೋಳ ಮತ್ತು ಪಾಂಡ್ಯರಾಜರು ಇತರ ಭಾಗಗಳಲ್ಲಿ ಆಳುತ್ತಿದ್ದರು.

ಪಾಂಡ್ಯರ ಕಾಲ ಮತ್ತು ವಂಶಾವಳಿ ಅಸ್ಪಷ್ಟ. ಮೆಗಾಸ್ತನೀಸ್ ಪಾಂಡ್ಯರ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಪ್ಲಿನಿಯ ಕಾಲದಲ್ಲಿ ಮದುರೆ ಪಾಂಡ್ಯರ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ಬೆಂeóÁಟೀನ್ ಚಕ್ರವರ್ತಿ ಜೂಲಿಯನ್ ಪಾಂಡ್ಯರ ರಾಯಭಾರಿಗೆ ಆದರಾತಿಥ್ಯ ನೀಡಿದನೆಂದು ತಿಳಿದುಬಂದಿದೆ. ಪಾಂಡ್ಯರ ಬಂದರುಗಳು ಮತ್ತು ವ್ಯಾಪಾರ ಸ್ಥಳಗಳ ಹೆಸರುಗಳನ್ನು ಟಾಲಮಿ ತಿಳಿದಿದ್ದನೆಂದು ಹೇಳಲಾಗಿದೆ.

ಪ್ರಾಚೀನ ತಮಿಳುನಾಡಿನ ಇತಿಹಾಸವನ್ನು ತಿಳಿಯಲು ಸಂಗಮ್ ಸಾಹಿತ್ಯ ಒಂದು ಆಧಾರವಾಗಿದೆ. ಆದರೆ ಇದರ ಕಾಲದ ಬಗ್ಗೆಯೇ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಸಾಹಿತ್ಯವನ್ನು ಸೃಷ್ಟಿಸುವ ಒಂದು ಸಂಸ್ಥೆಯಾಗಿದ್ದ ಸಂಗಮ್ ಪಾಂಡ್ಯರಾಜರ ಪೋಷಣೆಗೆ ಒಳಪಟ್ಟಿತ್ತೆಂದು ತಿಳಿದುಬರುತ್ತದೆ. ಮದುರೆ ಮೊದಲನೆಯ ಸಂಗಮ್‍ನ ಕೇಂದ್ರವಾಗಿತ್ತು.
ಪಾಂಡ್ಯರ ಚರಿತ್ರೆಯನ್ನು ತಿಳಿಯಲು ಕೆಲವು ತಾಮ್ರ ಮತ್ತು ಶಿಲಾ ಶಾಸನಗಳು ಸಹಾಯಕವಾಗಿವೆ. ಇವಲ್ಲದೆ ಹ್ಯೂಯನ್‍ತ್ಸಾಂಗ್ ಮೆಗಾಸ್ತನೀಸ್, ಮತ್ತು ವೆನಿಸಿನ ಯಾತ್ರಿಕ ಮಾರ್ಕೊಪೋಲೋ ಇವರ ಬರವಣಿಗೆಗಳಿಂದಲೂ ಪಾಂಡ್ಯರ ಚರಿತ್ರೆಯನ್ನು ತಿಳಿಯಬಹುದು.

ಸಂಗಮ್ ಕೃತಿಗಳಲ್ಲಿ ಪಾಂಡ್ಯ ಅರಸರ ಪ್ರಸ್ತಾಪ ಬರುತ್ತದೆ. ನೆಡುಂಚಳಿಯನ್ ಒಬ್ಬ ಪ್ರಸಿದ್ಧ ಪಾಂಡ್ಯ ದೊರೆ. ಅವನು ಚೇರ ಮತ್ತು ಚೋಳ ರಾಜರನ್ನು ತಲಾಯಲಂಗನಮ್ ಎಂಬಲ್ಲಿ ಸೋಲಿಸಿದನೆಂದು ತಿಳಿದುಬಂದಿದೆ. ನೆಡುಂಚಳಿಯನನ ರಾಜಧಾನಿ ಮದುರೆ. ಈತ ಸುಮಾರು 210ರಲ್ಲಿ ಆಳುತ್ತಿದ್ದನೆಂದು ನೀಲಕಂಠಶಾಸ್ತ್ರಿ ತಿಳಿಸಿದ್ದಾರೆ. ಇವನು ಕವಿಗಳಿಗೆ ಉದಾರಾಶ್ರಯ ನೀಡಿದ್ದ. ಇವನಿಂದ ಹಿಂದೂ ಧರ್ಮಕ್ಕೆ ಪ್ರೋತ್ಸಾಹ ದೊರಕಿತು. ಇವನ ಕಾಲದಲ್ಲಿ ಹೊರದೇಶಗಳೊಡನೆ ವ್ಯಾಪಾರ ಸಾಗುತ್ತಿತ್ತು. ನೆಡುಂಚಳಿಯನನ ಅನಂತರ ಬಂದ ರಾಜರಲ್ಲಿ ಉಗ್ರಪೆರುವಲೂಟಿ ಮುಖ್ಯನಾದವನು. ಇವನು ಸಾಹಿತ್ಯಾಭಿಮಾನಿಯಾಗಿದ್ದ. ಭೂತಪಾಂಡ್ಯನ್ ಎಂಬ ಮತ್ತೊಬ್ಬ ರಾಜನನ್ನು ಕವಿರಾಜನೆಂದು ಕರೆಯಲಾಗಿದೆ. ಭೂತಪಾಂಡ್ಯನ್ ವೀರ ಯೋಧನೂ ರಣಪರಾಕ್ರಮಿಯೂ ಉದಾರಿಯೂ ಆಗಿದ್ದ.

ಸಂಗಮ್ ಯುಗದ ಅನಂತರ ಪಾಂಡ್ಯರ ರಾಜಕೀಯ ಚರಿತ್ರೆ ಅಸ್ಪಷ್ಟ. 6ನೆಯ ಶತಮಾನದ ಕೊನೆಯ ಭಾಗದಲ್ಲಿ ಪಾಂಡ್ಯರು ದಕ್ಷಿಣಭಾರತದ ಮೇಲೆ ಪ್ರಭುತ್ವವನ್ನು ಸ್ಥಾಪಿಸಲು ಕಂಚಿಯ ಪಲ್ಲವರು ಮತ್ತು ಬಾದಾಮಿಯ ಪಶ್ಚಿಮ ಚಾಳುಕ್ಯರೊಡನೆ ಸ್ಪರ್ಧೆಗೆ ಇಳಿದರು. ಅಂದಿನಿಂದ ಪಾಂಡ್ಯರ ಚರಿತ್ರೆ ಸ್ಪಷ್ಟವಾಗುತ್ತದೆ. 6ನೆಯ ಶತಮಾನದಲ್ಲಿ ದಕ್ಷಿಣಭಾರತಕ್ಕೆ ಭೇಟಿ ನೀಡಿದ ಚೀನೀ ಯಾತ್ರಿಕ ಹ್ಯೂಯನ್‍ತ್ಸಾಂಗ್ ಪಾಂಡ್ಯರ ಪ್ರದೇಶವನ್ನು ಮೂಲಕೂಟವೆಂದು ಕರೆದಿದ್ದಾನೆ. ಮೂಲಕೂಟದ ಜನರು ವ್ಯಾಪಾರದಲ್ಲಿ ಆಸಕ್ತಿ ಯುಳ್ಳವರಾಗಿದ್ದರೆಂದು ಇವನು ತಿಳಿಸಿದ್ದಾನೆ. ಬೌದ್ಧಮತ ಪಾಂಡ್ಯರ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತೆಂದೂ ಹೇಳಿದ್ದಾನೆ. ಹ್ಯೂಯನ್‍ತ್ಸಾಂಗನ ಹೇಳಿಕೆಯಿಂದ ಪಾಂಡ್ಯರಾಜ್ಯದಲ್ಲಿ ಜೈನ ದಿಗಂಬರ ಪಂಥದವರು ಹೆಚ್ಚು ಸಂಖ್ಯೆಯಲ್ಲಿದ್ದರೆಂದು ತಿಳಿದುಬರುತ್ತದೆ.

590-620ರಲ್ಲಿ ಆಳಿದ ದೊರೆ ಕಡುಂಗಾನ್. ಈತನ ಮಗ ಮಾರವರ್ಮನ್ ಅವನಿ ಶೂಲಮಣಿ 620-645ರಲ್ಲಿ ಆಳುತ್ತಿದ್ದ. ಕಡುಂಗಾನನ ಬಗ್ಗೆ ಹೆಚ್ಚೇನೂ ತಿಳಿಯದು. ಈತ ತನ್ನ ರಾಜ್ಯವನ್ನು ಆಕ್ರಮಿಸಿದ್ದ ಕಳಭ್ರರನ್ನು ಓಡಿಸಿದನೆಂದು ತಿಳಿದುಬರುತ್ತದೆ. ಮಾರವರ್ಮನ ಅನಂತರದ ದೊರೆ ಸೆಂದನ್ (645-670). ಈತನಿಗೆ ವಾನವನ್ ಎಂಬ ಬಿರುದಿತ್ತು.
ಅನಂತರ ಬಂದ ದೊರೆ ಅರಿಕೇಸರಿ ಮಾರವರ್ಮ (ಪರಾಂಕುಶ) 670ರಿಂದ 700ರ ವರೆಗೆ ಆಳಿದ. ಇವನು ಚೇರರನ್ನು ಸೋಲಿಸಿ ರಾಜ್ಯ ವಿಸ್ತರಿಸಿದ. ಚಾಳುಕ್ಯ ಅರಸ 1ನೆಯ ವಿಕ್ರಮಾದಿತ್ಯನೊಡನೆ ಮಾರವರ್ಮ ಸೇರಿ ಪಲ್ಲವರ ಮೇಲೆ ಯುದ್ಧ ಮಾಡಿದ. ಪಲ್ಲವರ ಅರಸ ಪರಮೇಶ್ವರ ವರ್ಮನನ್ನು ಈತ ಸೋಲಿಸಿದ.

ಅರಿಕೇಸರಿಯ ತರುವಾಯ ಅವನ ಮಗನಾದ ರಣಧೀರ ಕೊಚ್ಚೋದಯನ್ 700ರಲ್ಲಿ ಪಟ್ಟಕ್ಕೆ ಬಂದ. ಇವನು ತಂದೆಯಂತೆ ರಾಜ್ಯವಿಸ್ತರಣಕಾರ್ಯದಲ್ಲಿ ತೊಡಗಿ ಕೊಂಗುದೇಶವನ್ನು (ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಗಳು) ಜಯಿಸಿ ಕೊಂಗಾರ್‍ಕೊಮನ್ ಎಂಬ ಬಿರುದು ಧರಿಸಿದ.

ರಣಧೀರನ ಅನಂತರ ಅವನ ಮಗ ಮಾರವರ್ಮ 1ನೆಯ ರಾಜಸಿಂಹ ರಾಜ್ಯ ಆಳಲಾರಂಭಿಸಿದ. ಇವನು 730ರಿಂದ 765ರ ವರೆಗೆ ರಾಜ್ಯವಾಳಿದ. ಇವನು ಪಲ್ಲವರ ಮೇಲೆ ಯುದ್ಧ ಮಾಡಿದ. ಪಲ್ಲವ ರಾಜ್ಯದಲ್ಲಿ ಸಿಂಹಾಸನಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಚಿತ್ರಮಾಯನ ಪರ ವಹಿಸಿ ಭಾರಿ ಸೈನ್ಯದೊಂದಿಗೆ ಹೊರಟು ನಂದಿಪುರಂ ರಣರಂಗದಲ್ಲಿ ನಂದಿವರ್ಮನ್ ಪಲ್ಲವಮಲ್ಲನನ್ನು ಸೆರೆಹಿಡಿದ. ಆದರೆ ಅಷ್ಟರಲ್ಲಿ ಪಲ್ಲವರ ಸೇನಾಧಿಪತಿ ಉದಯಚಂದ್ರ ಮುಂದೆ ಬಂದು ಪಾಂಡ್ಯರ ಸೈನ್ಯವನ್ನು ಎದುರಿಸಿ ನಂದಿವರ್ಮನನ್ನು ರಕ್ಷಿಸಿದ. ಚಿತ್ರಮಾಯನನ್ನು ಉದಯಚಂದ್ರ ಕೊಂದ. ಒಂದನೆಯ ರಾಜಸಿಂಹ 750ರಲ್ಲಿ ವೆನ್‍ಬೈ ಎಂಬಲ್ಲಿ ಗಂಗರು ಮತ್ತು ಚಾಳುಕ್ಯರನ್ನು ಜಯಿಸಿದ.

ರಾಜಸಿಂಹನ ತರುವಾಯ ಅವನ ಮಗನಾದ ಜಟಿಲ ಪರಾಂತಕ ನೆಡುಂಚಳಿಯನ್ ಅಥವಾ 1ನೆಯ ವರಗುಣ ಸಿಂಹಾಸನವನ್ನೇರಿದ (765-815). ಇವನು ರಾಜ್ಯ ವಿಸ್ತರಣ ಕಾರ್ಯವನ್ನು ಮುಂದುವರಿಸಿದ. ಇವನ ಕಾಲದಲ್ಲಿ ಪುನಃ ಪಲ್ಲವರು ಮತ್ತು ಪಾಂಡ್ಯರ ನಡುವೆ ಯುದ್ಧ ನಡೆಯಿತು. 1ನೆಯ ವರಗುಣ ಕಾವೇರಿ ನದಿಯ ದಕ್ಷಿಣ ತೀರದ ಪೆನ್ನಗಡಮ್ ಎಂಬಲ್ಲಿ ಪಲ್ಲವರ ಸೈನ್ಯವನ್ನು ಸೋಲಿಸಿದ. ವರಗುಣನ ವಿಸ್ತಾರಗೊಂಡ ರಾಜ್ಯ ತಿರುಚಿನಾಪಳ್ಳಿ, ಸೇಲಂ, ಕೊಯಮತ್ತೂರು ಮತ್ತು ತಿರುವಾಂಕೂರು ಜಿಲ್ಲೆಗಳನ್ನೊಳಗೊಂಡಿತ್ತು. 1ನೆಯ ವರಗುಣನ ತರುವಾಯ ಇವನ ಮಗನಾದ ಶ್ರೀಮಾರಾ ಶ್ರೀವಲ್ಲಭ ಪಟ್ಟಕ್ಕೆ ಬಂದ (815-862). ಇವನು ತಂದೆಯ ನೀತಿಯನ್ನೇ ಅನುಸರಿಸಿ ರಾಜ್ಯವಿಸ್ತರಣೆಯಲ್ಲಿ ತೊಡಗಿದ. ಪಟ್ಟಕ್ಕೆ ಬಂದಮೇಲೆ ಇವನು ಸಿಂಹಳದ್ವೀಪದ ಮೇಲೆ ದಾಳಿ ನಡೆಸಿದ. ಶ್ರೀವಲ್ಲಭನೊಡನೆ ಸಿಂಹಳ ದೊರೆ 1ನೆಯ ಸೇನ ಒಂದು ಒಪ್ಪಂದ ಮಾಡಿಕೊಂಡ. ಪಾಂಡ್ಯರ ಏಳಿಗೆಯನ್ನು ಸಹಿಸದ ಗಂಗರು, ಚೋಳರು, ಕಳಿಂಗರು ಮತ್ತು ಪಲ್ಲವರು ಒಂದಾದರು. ಈ ಒಕ್ಕೂಟದ ನೇತೃತ್ವವನ್ನು ಪಲ್ಲವರು ವಹಿಸಿದರು. ಶ್ರೀಮಾರ ಶ್ರೀವಲ್ಲಭ ಹೆದರದೆ ಕುಂಭಕೋಣಂ ಬಳಿ ಸಂಯುಕ್ತ ಸೈನ್ಯವನ್ನು ಸೋಲಿಸಿದ. ಪಲ್ಲವರು ಸೋತರು ಪುನಃ 3ನೆಯ ನಂದಿವರ್ಮನ ನೇತೃತ್ವದಲ್ಲಿ ಪಾಂಡ್ಯರ ಮೇಲೆ ಯುದ್ಧ ಮಾಡಿ ತೆಲ್ಲಾರು ಕದನದಲ್ಲಿ ಅವರನ್ನು ಸೋಲಿಸಿದರು. ನಂದಿವರ್ಮನ ಮಗ ನೃಪತುಂಗವರ್ಮ ಶ್ರೀವಲ್ಲಭನನ್ನು ಅರಿಸಿಲ್ ಎಂಬಲ್ಲಿ ಸೋಲಿಸಿದ. ಸಿಂಹಳದ ದೊರೆ 2ನೆಯ ಸೇನಾ ಪಲ್ಲವರೊಡನೆ ಸೇರಿ ಮದುರೆಯ ಮೇಲೆ ಯುದ್ಧಮಾಡಲು ಒಂದು ಸೈನ್ಯವನ್ನು ಕಳುಹಿಸಿದ. ಸಿಂಹಳದ ಸೈನ್ಯ ಮದುರೆಯನ್ನು ಲೂಟಿಮಾಡಿತು. ಶ್ರೀಮಾರಾ ಗಾಯಗೊಂಡು ಮೃತಪಟ್ಟ.

ಶ್ರೀಮಾರ ಶ್ರೀವಲ್ಲಭನ ಅನಂತರ ಅವನ ಮಗ 2ನೆಯ ವರಗುಣವರ್ಮ 862ರಲ್ಲಿ ಸಿಂಹಾಸನವನ್ನೇರಿದ. ಇವನು ಪಲ್ಲವರ ಘನತೆಯನ್ನು ಹೆಚ್ಚಿಸಲು ಚೋಳರ ರಾಜ್ಯದ ಮೇಲೆ ದಂಡೆತ್ತಿಹೋದ. ಆದರೆ ಚೋಳ, ಪಲ್ಲವ ಮತ್ತು ಪಶ್ಚಿಮಗಂಗರ ಸೈನ್ಯ ಇವನನ್ನು ಸುತ್ತುಗಟ್ಟಿತು. ಸಂಯುಕ್ತ ಸೈನ್ಯದ ನಾಯಕತ್ವವನ್ನು ಪಲ್ಲವರ ಅರಸ ಅಪರಾಜಿತ ವಹಿಸಿದ್ದ. ಶ್ರೀ ಪುರಂಭಿಯಮ್ ಎಂಬಲ್ಲಿ ನಡೆದ ಯುದ್ಧದಲ್ಲಿ ಪಲ್ಲವರಿಗೆ ಜಯ ಲಭಿಸಿತು. ಶ್ರೀಪುರಂಭಿಯಮ್‍ನಲ್ಲಿ ಪಾಂಡ್ಯರು ಅನುಭವಿಸಿದ ಸೋಲು ಅವರ ಪ್ರಾಬಲ್ಯಕ್ಕೆ ಧಕ್ಕೆಯುನ್ನುಂಟುಮಾಡಿತು.

ಎರಡನೆಯ ವರಗುಣನ ಅನಂತರ ಅವನ ತಮ್ಮ ಪರಾಂತಕ ವೀರನಾರಾಯಣ ಪಟ್ಟಕ್ಕೆ ಬಂದ (880-900) ಇವನ ಬಗ್ಗೆ ಹೆಚ್ಚೇನೂ ತಿಳಿದುಬಂದಿಲ್ಲ. ಪರಾಂತಕ ವೀರನಾರಾಯಣನ ತರುವಾಯ ಇವನ ಮಗ 2ನೆಯ ಮಾರವರ್ಮನ್ ರಾಜಸಿಂಹ ಪಾಂಡ್ಯರ ಅರಸನಾದ (900-920). ಇವನ ಕಾಲದಲ್ಲಿ ಚೋಳರ ದೊರೆ 1ನೆಯ ಪರಾಂತಕ ಪಾಂಡ್ಯ ರಾಜ್ಯದ ಮೇಲೆ ಮುತ್ತಿಗೆ ಹಾಕಿದ ರಾಜಸಿಂಹ ಸಿಂಹಳದ ಅರಸ 5ನೆಯ ಕಸ್ಸಪನ ಸಹಾಯವನ್ನು ಯಾಚಿಸಿದ. ರಾಜಸಿಂಹನಿಗೆ ಸಿಂಹಳದ ಸಹಾಯ ದೊರಕಿತು. ಆದರೆ ಚೋಳರ ದೊರೆ 1ನೆಯ ಪರಾಂತಕ ರಾಜಸಿಂಹನ ಮತ್ತು ಅವನ ಸಹಾಯಕ್ಕೆ ಬಂದ ಸಿಂಹಳದ ಸೈನ್ಯವನ್ನು ವೆಲ್ಲೂರಿನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದ (915). ಸೋತ ರಾಜಸಿಂಹ ಸಿಂಹಳಕ್ಕೆ ಓಡಿಹೋದ. ಒಂದನೆಯ ಪರಾಂತಕ ಮದುರೈಕೊಂಡ ಎಂಬ ಬಿರುದನ್ನು ಧರಿಸಿದ. ಪಾಂಡ್ಯರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಯಿತು. ಸಿಂಹಳಕ್ಕೆ ಓಡಿಹೋದ ರಾಜಸಿಂಹ ಕೆಲವು ದಿನಗಳ ಅನಂತರ ಕೇರಳಕ್ಕೆ ಹಿಂದಿರುಗಿದ. ಪಾಂಡ್ಯರು ಚೋಳರ ಅಧೀನಕ್ಕೊಳಗಾದರು.
ವೆಲ್ಲೂರು ಯುದ್ಧದ ಅನಂತರ ಸುಮಾರು 30 ವರ್ಷಗಳ ಕಾಲ ಪಾಂಡ್ಯರು ಚೋಳರ ಸಾರ್ವಭೌಮತ್ವವನ್ನು ಒಪ್ಪಿಕೊಂಡಿದ್ದರು. ಆದರೆ ತಕ್ಕೊಲಮ್ ಯುದ್ಧದಲ್ಲಿ (949) ಪರಾಂತಕ ಸೋತ. ಅನಂತರ ಚೋಳ ರಾಜ್ಯದಲ್ಲಿ ಸಂಧಿಕಾಲವೇರ್ಪಟ್ಟಾಗ ವೀರಪಾಂಡ್ಯನೆಂಬಾತ ಚೋಳರನ್ನು ಜಯಿಸಿದನೆಂದು ತಿಳಿದುಬರುತ್ತದೆ. ಕೊನೆಯವರೆಗೂ ವೀರಪಾಂಡ್ಯ ಸ್ವತಂತ್ರವಾಗಿ ಆಳಿದನೆಂದು ವ್ಯಕ್ತವಾಗುತ್ತದೆ.

ಚೋಳರಿಗೂ ಪಾಂಡ್ಯರಿಗೂ ಆಗಾಗ್ಗೆ ಯುದ್ಧಗಳು ನಡೆಯುತ್ತಲೇ ಇದ್ದುವು. ರಾಜರಾಜ ಚೋಳ ಪಾಂಡ್ಯರನ್ನು ಸೋಲಿಸಿದ. ಇವನ ಮಗ 1ನೆಯ ರಾಜೇಂದ್ರನೂ ಪಾಂಡ್ಯರ ರಾಜ್ಯದ ಮೇಲೆ ಆಕ್ರಮಣ ನಡೆಸಿದ. 10ನೆಯ ಶತಮಾನದ ಅಂತ್ಯಭಾಗದಲ್ಲಿ ಪಾಂಡ್ಯರು ಮತ್ತೆ ಪ್ರಬಲರಾಗಲು ಪ್ರಯತ್ನಿಸಿದರು. ಆದರೆ ಚೋಳರ ದೊರೆ 1ನೆಯ ಕುಲೋತ್ತುಂಗ ಅವರ ಯತ್ನವನ್ನು ಭಂಗಗೊಳಿಸಿದ.

ಒಂದನೆಯ ಕುಲೋತ್ತುಂಗನ ಕಾಲದಲ್ಲಿ ಪಾಂಡ್ಯರ ಏಳಿಗೆಯನ್ನು ತಡೆಗಟ್ಟಲು ಅವರ ರಾಜ್ಯದಲ್ಲಿ ಸೈನಿಕ ವಸತಿಗಳನ್ನು ಸ್ಥಾಪಿಸಲಾಯಿತು.

12ನೆಯ ಶತಮಾನದಲ್ಲಿ ಪಾಂಡ್ಯರು ಪುನಃ ಪ್ರಬಲರಾಗಲು ಪ್ರಯತ್ನಿಸಿದರು. ಆದರೆ ಪಾಂಡ್ಯ ರಾಜಕುಮಾರರಲ್ಲಿ ಸಿಂಹಾಸನಕ್ಕಾಗಿ ಕಲಹ ಪ್ರಾರಂಭವಾಯಿತು. ಕುಲಶೇಖರ ಪಾಂಡ್ಯ ಮತ್ತು ಪರಾಕ್ರಮ ಪಾಂಡ್ಯರು ಸಿಂಹಾಸನಕ್ಕಾಗಿ ಹೋರಾಡತೊಡಗಿದರು. ಪರಾಕ್ರಮ ಪಾಂಡ್ಯ ಸಿಂಹಳದ ದೊರೆಯ ಸೈನ್ಯದ ಸಹಾಯವನ್ನು ಕೋರಿದ. ಸಿಂಹಳದ ಸೈನ್ಯ ಬರುವುದಕ್ಕೆ ಮೊದಲೇ ಕುಲಶೇಖರ ತನ್ನ ಪ್ರತಿಸ್ಪರ್ಧಿಯನ್ನು ಕೊಂದ. ಸಿಂಹಳದ ಸೈನ್ಯ ಕುಲಶೇಖರನನ್ನು ಸೋಲಿಸಿತು. ಆಗ ಕುಲಶೇಖರ ಚೋಳರನ್ನು ಆಶ್ರಯಿಸಿದ. ಅವರ ಬೆಂಬಲದಿಂದ ಕುಲಶೇಖರ ಮದುರೆಯನ್ನು ಪ್ರವೇಶಿಸಿ ಸಿಂಹಳದ ಸೈನ್ಯವನ್ನು ಸೋಲಿಸಿದ. 
ಕುಲಶೇಖರ ಯುದ್ಧ ಚಟುವಟಿಕೆಗಳನ್ನು ಸಹಿಸದ ಚೋಳರು ಅವನನ್ನು ರಾಜ್ಯದಿಂದ ಓಡಿಸಿ ವೀರಪಾಂಡ್ಯನಿಗೆ ಮದುರೆ ರಾಜ್ಯವನ್ನು ಬಿಟ್ಟುಕೊಟ್ಟರು. ವೀರಪಾಂಡ್ಯನೂ ಚೋಳರಿಗೆ ಅವಿಧೇಯನಾಗಿ ವರ್ತಿಸಿದ. ಆಗ ಚೋಳರ ಅರಸ ಕುಲೋತ್ತುಂಗ 1178ರಲ್ಲಿ ವೀರಪಾಂಡ್ಯನನ್ನು ಸೋಲಿಸಿ ಪಾಂಡ್ಯ ರಾಜ್ಯವನ್ನು ವಿಕ್ರಮಪಾಂಡ್ಯನಿಗೆ ನೀಡಿದ.

ವಿಕ್ರಮಪಾಂಡ್ಯನ ತರುವಾಯ 1190 ರಲ್ಲಿ ಜಟಾವರ್ಮನ್ ಕುಲಶೇಖರ ರಾಜನಾದ. ಕುಲಶೇಖರ ಅವಿಧೇಯತೆಯಿಂದ ಕೋಪಗೊಂಡ 3ನೆಯ ಕುಲೋತ್ತುಂಗ ಅವನ ಮೇಲೆ ಯುದ್ಧ ಮಾಡಿ ಮದುರೆಯನ್ನು ಧ್ವಂಸ ಮಾಡಿದ. 1216ರಲ್ಲಿ ಜಟಾವರ್ಮನ ತಮ್ಮನಾದ ಮಾರವರ್ಮನ್ ಸುಂದರ ಪಾಂಡ್ಯ ಪಟ್ಟಕ್ಕೆ ಬಂದ. ತನಗೂ ತನ್ನ ಅಣ್ಣನಿಗೂ ಯುದ್ಧದಲ್ಲಾದ ಅಪಮಾನದ ಸೇಡನ್ನು ತೀರಿಸಿಕೊಳ್ಳಲು ಅವನು ಚೋಳರ ರಾಜ್ಯದ ಮೇಲೆ ದಂಡೆತ್ತಿ ಹೋದ. ಉರಿಯೂರು ಮತ್ತು ತಂಜಾವೂರುಗಳನ್ನು ಸುಂದರಪಾಂಡ್ಯ ಆಕ್ರಮಿಸಿಕೊಂಡು ಕುಲೋತ್ತುಂಗನನ್ನು ಮತ್ತು ಅವನ ಮಗನಾದ 3ನೆಯ ರಾಜರಾಜನನ್ನು ರಾಜ್ಯದಿಂದ ಓಡಿಸಿದ. ತಂಜಾವೂರಿನ ಬಳಿ ಇದ್ದ ಆಯಿರತ್ತಾಲಿಯ ಚೋಳ ಪಟ್ಟಾಭಿಷೇಕ ಸಭಾಂಗಣದಲ್ಲಿ ಸುಂದರಪಾಂಡ್ಯ ವೀರಾಭಿಷೇಕ ಮಾಡಿಕೊಂಡ. ಹೀಗೆ ಸುಂದರಪಾಂಡ್ಯ ಚೋಳರ ಮೇಲೆ ಸೇಡು ತೀರಿಸಿಕೊಂಡ. ಕುಲೋತ್ತುಂಗ ಹೊಯ್ಸಳ ಇಮ್ಮಡಿ ಬಲ್ಲಾಳನ ಸೈನ್ಯಸಹಾಯವನ್ನು ಕೋರಿದ. ಕುಲೋತ್ತುಂಗನ ಸಹಾಯಕ್ಕಾಗಿ ಹೊಯ್ಸಳ ದೊರೆ ತನ್ನ ಸೈನ್ಯವನ್ನು ಕಳುಹಿಸಿಕೊಟ್ಟ. ಪಾಂಡ್ಯರ ರಾಜ್ಯದ ಮೇಲೆ ಎರಡೂ ಸೈನ್ಯಗಳು ಧಾವಿಸಿ ಬರುತ್ತಿದ್ದುದನ್ನು ಕೇಳಿ ಹೆದರಿದ ಸುಂದರ ಪಾಂಡ್ಯ ಅವರೊಡನೆ ಶಾಂತಿ ಒಪ್ಪಂದ ಮಾಡಿಕೊಂಡ. ಇದರ ಪ್ರಕಾರ ಸುಂದರಪಾಂಡ್ಯ ಪುದುಕೋಟೆಯಲ್ಲಿ ಕುಲೋತ್ತುಂಗನಿಗೆ ಅವನ ರಾಜ್ಯವನ್ನು ಹಿಂದಕ್ಕೆ ಬಿಟ್ಟುಕೊಟ್ಟ.

1218ರಲ್ಲಿ 3ನೆಯ ಕುಲೋತ್ತುಂಗ ತೀರಿಕೊಂಡ. ಇವನ ತರುವಾಯ ಆಳಲಾರಂಭಿಸಿದ ಮುಮ್ಮಡಿ ರಾಜರಾಜನ ಕಾಲದಲ್ಲಿ ಚೋಳರಾಜ್ಯ ಅವನತಿಯ ಹಾದಿ ಹಿಡಿಯಿತು. ಮುಮ್ಮಡಿ ರಾಜರಾಜ ಅಸಮರ್ಥನೂ ಅವಿವೇಕಿಯೂ ಆಗಿದ್ದ. ಪಾಂಡ್ಯರ ಅಧೀನಕೊಳಗಾಗಿದ್ದ ಇವನ ಕಾಲದಲ್ಲಿ ರಾಜ್ಯದಲ್ಲಿ ಗಲಭೆಗಳುಂಟಾದುವು. ಗಲಭೆಗೆ ಕಾರಣರಾದ ವಡ್ಡ ಸೈನಿಕರನ್ನು ಸುಂದರಪಾಂಡ್ಯ ಓಡಿಸಿದ. ಕಾಡವರ ನಾಯಕ ಕೊಪ್ಪೇರು ಜಿಂಗ ದಿನೇದಿನೇ ಪ್ರಬಲನಾಗಿ ಚೋಳರ ವಿರುದ್ಧ ಸುಂದರಪಾಂಡ್ಯನೊಂದಿಗೆ ಸ್ನೇಹ ಬೆಳೆಸಿಕೊಂಡ. ಚೋಳ ಮುಮ್ಮಡಿ ರಾಜರಾಜ ಸುಂದರಪಾಂಡ್ಯನಿಗೆ ಕೊಡಬೇಕಾಗಿದ್ದ ಪೊಗದಿಯನ್ನು ಕೊಡದೆ ಅವನ ಕೋಪಕ್ಕೆ ಗುರಿಯಾದ. ಅವನು ಸೈನ್ಯಸಮೇತನಾಗಿ ಹೊರಟು ಪಾಂಡ್ಯರಾಜ್ಯದ ಮೇಲೆ ನುಗ್ಗಿದ. ಆಗ ಸುಂದರ ಪಾಂಡ್ಯ ರಾಜರಾಜನನ್ನು ಸೋಲಿಸಿದ. ಅವನಿಂದ ಅಪಾರ ಐಶ್ವರ್ಯವನ್ನು ದೋಚಿದನಲ್ಲದೆ ಮುಡಿಕೊಂಡ ಚೋಳಪುರದಲ್ಲಿ ವಿಜಯಾಭಿಷೇಕ ಮಾಡಿಕೊಂಡ. ಮುಮ್ಮಡಿ ನರಸಿಂಹನನ್ನು ಸಂಧಿಸಲು ರಾಜರಾಜ ಪ್ರಯತ್ನಿಸಿದಾಗ ಮಾರ್ಗಮಧ್ಯದಲ್ಲಿ ಪಾಂಡ್ಯರ ಮಿತ್ರ ಕೊಪ್ಪೇರು ಜಿಂಗನಿಂದ ತೆಳ್ಳಾರು ಕದನದಲ್ಲಿ ಸೋತುಹೋದ. ರಾಜರಾಜನನ್ನು ಕೊಪ್ಪೇರು ಜಿಂಗ ಸೇಂದುಮಂಗಲದಲ್ಲಿ ಸೆರೆಯಲ್ಲಿಟ್ಟ. ಚೋಳ ರಾಜನನ್ನು ಹೇಗಾದರೂ ಮಾಡಿ ಮೊದಲಿನ ಸ್ಥಾನಕ್ಕೇರಿಸಲು ಹೊಯ್ಸಳ ನರಸಿಂಹ ಪ್ರಯತ್ನಿಸಿದ. ಅವನು ಗೋಪಯ್ಯ ಮತ್ತು ಅಪ್ಪಣ ಎಂಬ ಸೈನಾಧಿಕಾರಿಗಳ ನೇತೃತ್ವದಲ್ಲಿ ಕೊಪ್ಪೇರು ಜಿಂಗನ ವಿರುದ್ಧ ಒಂದು ಸೈನ್ಯವನ್ನು ಕಳುಹಿಸಿಕೊಟ್ಟ. ಹೊಯ್ಸಳ ಅಧಿಕಾರಿಗಳು ಕೊಪ್ಪೇರು ಜಿಂಗನ ರಾಜ್ಯವನ್ನು ಲೂಟಿ ಮಾಡಿ ರಾಜರಾಜನನ್ನು ಬಿಡಿಸಿಕೊಂಡರು. ಚೋಳ ಸಿಂಹಾಸನವನ್ನು ರಾಜರಾಜನಿಗೆ ನೀಡುವುದಾಗಿ ಕೊಪ್ಪೇರು ಜಿಂಗ ಹೊಯ್ಸಳ ನರಸಿಂಹನಿಗೆ ತಿಳಿಸಿದ. ಇದರಿಂದ ತೃಪ್ತನಾದ ನರಸಿಂಹ ತನ್ನ ಸೈನ್ಯಾಧಿಕಾರಿಗಳಿಗೆ ದಾಳಿಯನ್ನು ನಿಲ್ಲಿಸಲು ಆಜ್ಞಾಪಿಸಿದ. ಇದೇ ಕಾಲದಲ್ಲಿ ಹೊಯ್ಸಳ ನರಸಿಂಹ ಪಾಂಡ್ಯರ ಅರಸನನ್ನು ಮಹೇಂದ್ರಮಂಗಳಂ ಎಂಬಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದ. ನರಸಿಂಹ ಚೋಳರಾಜನನ್ನು ಅವನ ರಾಜ್ಯಕ್ಕೆ ಕರೆದುಕೊಂಡು ಹೋಗಿ 1231ರಲ್ಲಿ ಅವನಿಗೆ ರಾಜ್ಯಾಭಿಷೇಕ ಮಾಡಿದ. 

ಮುಮ್ಮಡಿ ರಾಜರಾಜ ಹೊಯ್ಸಳರ ಸಹಾಯದಿಂದ ಮತ್ತೆ ಸಿಂಹಾಸನವನ್ನು ಪಡೆದರೂ ಅವನು ಕಷ್ಟಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಪಾಂಡ್ಯರು, ಕಾಡವರು ಮತ್ತು ಕಾಕತೀಯರು ಪ್ರಬಲರಾಗಿದ್ದುದರಿಂದ ಅವನ ರಾಜ್ಯಕ್ಕೆ ನೆಮ್ಮದಿ ತಪ್ಪಿತ್ತು. ರಾಜರಾಜ ಹೊಯ್ಸಳರ ಅಧೀನದಲ್ಲೇ ಉಳಿಯಬೇಕಾಯಿತು. 

ಮೂರನೆಯ ರಾಜರಾಜನ ಮರಣದ ಅನಂತರ ಬಂದ ಮೂರನೆಯ ರಾಜೇಂದ್ರಚೋಳ ದೊರೆ ಪಾಂಡ್ಯರ ಮೇಲೆ ಯುದ್ಧ ಮಾಡಿ ಮಾರವರ್ಮನ್ 2ನೆಯ ಸುಂದರಪಾಂಡ್ಯನನ್ನು 1238ರಲ್ಲಿ ಸೋಲಿಸಿದ. ಚೋಳರು ಪ್ರಬಲರಾಗದಂತೆ ತಡೆಯಲು ಹೊಯ್ಸಳ ಸೋಮೇಶ್ವರ ಪಾಂಡ್ಯರ ಪಕ್ಷವನ್ನು ಸೇರಿದ. ಇಬ್ಬರೂ ಸೇರಿ ರಾಜೇಂದ್ರನನ್ನು ಸೋಲಿಸಿದರು. ರಾಜೇಂದ್ರನೆಲ್ಲೂರಿನ ಗಂಡಗೋಪಾಲನೊಡನೆ ಸ್ನೇಹ ಬೆಳೆಸಿಕೊಂಡ. ಗಂಡಗೋಪಾಲ ರಾಜೇಂದ್ರನ ಆಡಳಿತವನ್ನು ಬಲಗೊಳಿಸಿ ಹೊಯ್ಸಳರ ಶತ್ರುಗಳಾಗಿದ್ದ ವಾರಂಗಲ್ಲಿನ ಕಾಕತೀಯರೊಂದಿಗೆ ಸ್ನೇಹ ಬೆಳೆಸಿಕೊಂಡ.

ಮಾರವರ್ಮನ್ 2ನೆಯ ಸುಂದರಪಾಂಡ್ಯನ ತರುವಾಯ ಜಟಾವರ್ಮನ್ ಸುಂದರಪಾಂಡ್ಯ ಪಟ್ಟಕ್ಕೆ ಬಂದ (1258-1268). ಜಟಾವರ್ಮನ್ ಸಮರ್ಥದೊರೆ. ಇವನ ಆಳ್ವಿಕೆಯಲ್ಲಿ ಪಾಂಡ್ಯರ ಅಧಿಕಾರ ಉನ್ನತಿಗೆ ಏರಿತು. ಪಾಂಡ್ಯರ ರಾಜ್ಯ ವೈಭವದಿಂದ ರಾರಾಜಿಸಿತು. ಜಟಾವರ್ಮನ್ ಚೇರರಾಜನಾದ ವೀರರವಿ ಉದಯಮಾರ್ತಾಂಡ ವರ್ಮನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಂಡನಲ್ಲದೆ, ಚೋಳರನ್ನೂ ಸದೆಬಡಿದ. ಜಟಾವರ್ಮನಿಗೆ ಚೋಳರ ಅರಸ ಕಪ್ಪಕಾಣಿಕೆ ಕೊಡಲು ಒಪ್ಪಿಸಿದ. ಅನಂತರ ಜಟಾವರ್ಮ ಸಿಂಹಳದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ಅರಸನಿಂದ ಅಪಾರ ಐಶ್ವರ್ಯ ಮತ್ತು ಆನೆಗಳನ್ನು ಪಡೆದುಕೊಂಡ. ಹೊಯ್ಸಳರ ಮೇಲೆ ಯುದ್ಧ ಮಾಡಿ ಕಣ್ಣಾನೂರು ಮತ್ತು ಕೊಪ್ಪಂಕೋಟೆಯನ್ನು ವಶಪಡಿಸಿಕೊಂಡ. ಹೊಯ್ಸಳರ ಆನೆ ಕುದುರೆಗಳು ಮತ್ತು ಐಶ್ವರ್ಯ ಪಾಂಡ್ಯರ ವಶವಾದುವು. 1262ರಲ್ಲಿ ನಡೆದ ಕದನದಲ್ಲಿ ಹೊಯ್ಸಳ ಸೋಮೇಶ್ವರ ಸುಂದರಪಾಂಡ್ಯನ ಕೈಯಿಂದಲೇ ಹತನಾದನೆಂದು ತಿಳಿಯುತ್ತದೆ. ಸುಂದರಪಾಂಡ್ಯ ಕಾಡವರ ದೊರೆ ಕೊಪ್ಪೇರು ಜಿಂಗನನ್ನೂ ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಂಡ. ಸೋತ ಕೊಪ್ಪೇರು ಜಿಂಗನ ಮೇಲೆ ದಯೆ ತೋರಿಸಿ ಅವನ ರಾಜ್ಯವನ್ನು ಅವನಿಗೇ ಬಿಟ್ಟುಕೊಟ್ಟ. ಅನಂತರ ಕಾಕತೀಯ ಗಣಪತಿಯನ್ನು ಸುಂದರಪಾಂಡ್ಯ ಸೋಲಿಸಿದ. ಮಲಯಚಂದ್ರಬಾಹುವಿನ ಮಗ ಸೋತು ಸುಂದರನಿಗೆ ಶರಣಾಗತನಾದ. ನೆಲ್ಲೂರಿನಲ್ಲಿ ಸುಂದರಪಾಂಡ್ಯ ವೀರಾಭಿಷೇಕ ಮಾಡಿಕೊಂಡ. ಜಟಾವರ್ಮನ್ ಸುಂದರಪಾಂಡ್ಯ ಮಹಾರಾಜಾಧಿರಾಜ. ಶ್ರೀ ಪರಮೇಶ್ವರ ಮೊದಲಾದ ಬಿರುದುಗಳನ್ನು ಧರಿಸಿದ. ಹೀಗೆ ಸುಂದರಪಾಂಡ್ಯ ಅನೇಕರನ್ನು ಜಯಿಸಿ ಪಾಂಡ್ಯರ ಕೀರ್ತಿಯನ್ನು ಹೆಚ್ಚಿಸಿದ. ಇವನು ಯುದ್ಧಗಳಲ್ಲಿ ಗಳಿಸಿದ ಹಣವನ್ನು ಚಿದಂಬರಂ ಮತ್ತು ಶ್ರೀರಂಗದ ದೇವಾಲಯಗಳಿಗೆ ನೀಡಿದ.

ಪಾಂಡ್ಯ ಕೊನೆಯ ಪ್ರಮುಖ ದೊರೆ ಮಾರವರ್ಮನ್ ಕುಲಶೇಖರ (1268-1310) ಇವನು ಸಮರ್ಥ. ಇವನು 3ನೆಯ ಚೋಳನನ್ನೂ ಹೊಯ್ಸಳ ಸಾಮ್ರಾಜ್ಯದ ತಮಿಳು ನಾಡಿನ ಭಾಗದ ದೊರೆ ರಾಮನಾಥನನ್ನೂ ಸೋಲಿಸಿ ಅವರ ರಾಜ್ಯಗಳನ್ನು ವಶಪಡಿಸಿಕೊಂಡ. ಕುಲಶೇಖರನ ಅಧಿಕಾರವನ್ನು ಸಿಂಹಳದ ದೊರೆ 2ನೆಯ ಪರಾಕ್ರಮಬಾಹು ಒಪ್ಪಿಕೊಂಡ. ಮೂರನೆಯ ರಾಜೇಂದ್ರನ ಅನಂತರ ಚೋಳರಾಜರ ಹೆಸರು ತಿಳಿದುಬರುವುದಿಲ್ಲವಾದ್ದರಿಂದ ಚೋಳರಾಜ್ಯ ಪಾಂಡ್ಯರಾಜ್ಯದಲ್ಲಿ ವಿಲೀನಗೊಂಡಿರಬೇಕೆಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಚೋಳಮಂಡಲ ಹೊಯ್ಸಳರ ಸಾಮ್ರಾಜ್ಯದ ತಮಿಳು ಜಿಲ್ಲೆಗಳು ಇವೆರಡಕ್ಕೂ ಕುಲಶೇಖರ ಮಹಾರಾಜನಾದ.

ಕುಲಶೇಖರನ ಮರಣಾಂತರ (1308-9) ಸಂಭವಿಸಿದ ಆಂತರಿಕ ಯುದ್ಧದಿಂದಲೂ ಮುಸ್ಲಿಮರ ದಾಳಿಗಳಿಂದಲೂ ಲಾಭ ಪಡೆದು ಸಿಂಹಳ ಸ್ವತಂತ್ರವಾಯಿತು. ಕುಲಶೇಖರನ ಕೊನೆಯ ದಿನಗಳು ಸುಖಮಯವಾಗಿರಲಿಲ್ಲ ರಾಜ್ಯಕ್ಕಾಗಿ ಅವನ ಮಕ್ಕಳಲ್ಲಿ ಕಲಹವೇರ್ಪಟ್ಟಿತು. ಕುಲಶೇಖರ ತನ್ನ ಕಿರಿಯ ಮಗನಾದ ವೀರಪಾಂಡ್ಯ ಪಟ್ಟಕ್ಕೆ ಬರಬೇಕೆಂದು ಆಶಿಸಿದ. ಆದರೆ ಹಿರಿಯ ಮಗನಾದ ಸುಂದರಪಾಂಡ್ಯ ಇದನ್ನು ಒಪ್ಪದೆ ಯುದ್ಧಕ್ಕೆ ನಿಂತ. ಯುದ್ಧದಲ್ಲಿ ವೀರ ಪಾಂಡ್ಯನದೇ ಮೇಲುಗೈಯಾಯಿತು. ಇದನ್ನರಿತ ಸುಂದರಪಾಂಡ್ಯ ಮಲ್ಲಿಕ್ ಕಾಪುರನ ಸಹಾಯವನ್ನು ಕೋರಿದ. ಮಲ್ಲಿಕ್‍ಕಾಫುರ್ ದಕ್ಷಿಣದ ರಾಜ್ಯಗಳನ್ನು ಲೂಟಿ ಮಾಡಿ ಐಶ್ವರ್ಯವನ್ನು ದೋಚಿಕೊಂಡು ಹೋದ. ಅವನ ದಾಳಿಯ ಸಮಯದಲ್ಲಿ ವೀರ ಪಾಂಡ್ಯ ಮತ್ತು ಸುಂದರಪಾಂಡ್ಯರಿಬ್ಬರೂ ಒಟ್ಟಿಗೆ ಸೇರಿ ಶತ್ರುವಿನ ವಿರುದ್ಧ ಯುದ್ಧ ಮಾಡಿದರೆಂದು ಕೆಲವರು ಹೇಳಿದ್ದಾರೆ. ಮಲ್ಲಿಕ್ ಕಾಫುರ್ ಪಾಂಡ್ಯ ರಾಜ್ಯವನ್ನು ಬಿಟ್ಟುಹೋದ ಮೇಲೆ ವೀರಪಾಂಡ್ಯ ಮತ್ತು ಸುಂದರಪಾಂಡ್ಯರು ಪುನಃ ಯುದ್ಧದಲ್ಲಿ ತೊಡಗಿದರೆಂದು ಕಂಡುಬರುತ್ತದೆ. ವೀರಪಾಂಡ್ಯ ತಿರುವಾಂಕೂರಿನ ರಾಜನ ಸಹಾಯವನ್ನು ಪಡೆದುಕೊಂಡು ಸುಂದರಪಾಂಡ್ಯನನ್ನು ಎದುರಿಸಿದ. ಅಂತ್ಯದಲ್ಲಿ ವೀರಪಾಂಡ್ಯ ಸೋತನೆಂದು ತಿಳಿದುಬರುತ್ತದೆ. ಸುಂದರಪಾಂಡ್ಯನಿಗೆ ಸಿಂಹಾಸನ ದೊರಕಿತು.

ಗಯಾಸುದ್ದೀನ್ ತುಗಲಕ್ ದಕ್ಷಿಣದ ರಾಜ್ಯಗಳನ್ನು ನಾಶಗೊಳಿಸಲು ತನ್ನ ಮಗನಾದ ಉಲಫ್ ಖಾನವನ್ನು ಕಳುಹಿಸಿಕೊಟ್ಟ. ಇವನು ಪಾಂಡ್ಯ ರಾಜ್ಯದ ಮೇಲೆ ದಾಳಿ ನಡೆಸಿ ಪರಾಕ್ರಮದೇವನೆಂಬವನನ್ನು ಸೆರೆಹಿಡಿದ. ಈ ಘಟನೆಯೊಂದಿಗೆ ಪಾಂಡ್ಯರ ಆಳ್ವಿಕೆ ಕೊನೆಗೊಂಡಿತು. ಪಾಂಡ್ಯರ ರಾಜ್ಯ ನಿರ್ನಾಮವಾಯಿತು. 

ಹ್ಯೂಯನ್‍ತ್ಸಾಂಗ್ ಪಾಂಡ್ಯರಾಜ್ಯದಲ್ಲಿ ಸಂಚರಿಸಿ ಅಲ್ಲಿನ ಜನಜೀವನವನ್ನು ವರ್ಣಿಸಿದ್ದಾನೆ. ಪಾಂಡ್ಯರ ಕಾಲದಲ್ಲಿ ರಾಜ್ಯದಲ್ಲಿ ಶಾಂತಿ ನೆಲಸಿತ್ತೆಂದು ತಿಳಿದುಬರುತ್ತದೆ. ಪಾಂಡ್ಯರು ತಮಿಳು ಸಾಹಿತ್ಯದ ಬೆಳವಣಿಗೆಗೆ ಉದಾರ ಪ್ರೋತ್ಸಾಹ ನೀಡಿದ್ದರು. ಹೊರದೇಶಗಳೊಡನೆ ವ್ಯಾಪಾರ ಸಾಗುತ್ತಿತ್ತು. ಮದುರೆ ಒಂದು ಮುಖ್ಯವ್ಯಾಪಾರ ಕೇಂದ್ರವಾಗಿತ್ತು. ಪಾಂಡ್ಯರ ರಾಜ್ಯದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವಿತ್ತೆಂದು ತಿಳಿದುಬರುತ್ತದೆ. ಶೈವ ಮತ್ತು ವೈಷ್ಣವ ಸಂತರು ಭಕ್ತಿ ಮಾರ್ಗವನ್ನು ಜನಪ್ರಿಯಗೊಳಿಸಿದರು. ಪಾಂಡ್ಯರು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡಿದರು. ಇವರು ದ್ರಾವಿಡ ಶೈಲಿಯನ್ನು ಶ್ರೀಮಂತಗೊಳಿಸಿದರು. ಜಂಬುಕೇಶ್ವರ ದೇವಾಲಯ, ಶ್ರೀರಂಗ ದೇವಾಲಯ ಮತ್ತು ಕುಂಭಕೋಣಂ ದೇವಾಲಯ ಇವುಗಳಿಗೆ ಇವರು ಹೊಸ ಗೋಪುರಗಳನ್ನು ಕಟ್ಟಿಸಿದರು. ಹೀಗೆ ಪಾಂಡ್ಯರು ದಕ್ಷಿಣ ಭಾರತದ ಸಂಸ್ಕøತಿಗೆ ಕೆಲವು ಕಾಣಿಕೆಗಳನ್ನು ಸಲ್ಲಿಸಿದ್ದಾರೆ. 
(ಟಿ.ವಿ.ಜಿ.ಯು.)

ವಾಸ್ತುಶಿಲ್ಪ : ಸುಮಾರು 7ನೆಯ ಶತಮಾನದಲ್ಲಿ ತಮಿಳುನಾಡಿನ ಪಾಂಡ್ಯ ಮಂಡಲವೆನಿಸಿದ ಈಗಿನ ಮದುರೆ, ರಾಮನಾಥಪುರ, ತಿರುನೆಲ್ವೇಲಿ, ಕನ್ಯಾಕುಮಾರಿ ಜಿಲ್ಲೆಗಳನ್ನೂ ತಿರುಚನಾಪಳ್ಳಿ ಜಿಲ್ಲೆಯ ದಕ್ಷಿಣ ಭಾಗವನ್ನೂ ಕೇರಳದ ತಿರುವನಂತಪುರ ಜಿಲ್ಲೆಯನ್ನೂ ಒಳಗೊಂಡ ಪ್ರದೇಶದಲ್ಲಿ ಪಾಂಡ್ಯರು ಕಲ್ಲಿನಲ್ಲಿ ಹಲವಾರು ಗುಹೆಗಳನ್ನು ಕೊರೆಯಿಸಿದರು. ಸಾಮಂತ ಮನೆತನಗಳಾದ ಅದಿಯಮಾನ್ ಮತ್ತು ಮುತ್ತರೈಯರ್ ವಂಶಸ್ಥರೂ ಪಾಂಡ್ಯರ ಪ್ರಭಾವಕ್ಕೊಳಗಾಗಿ ತಮ್ಮ ಅಧೀನ ಪ್ರದೇಶಗಳಲ್ಲಿ ಇಂಥ ಗುಹಾಲಯಗಳನ್ನು ಕೊರೆಯಿಸಿದರು. ಇಂಥ ಸುಮಾರು 60 ಗುಹಾಲಯಗಳು ಈ ಪ್ರದೇಶಗಳಲ್ಲಿ ಕಂಡುಬಂದಿವೆ.
ಏಳನೆಯ ಶತಮಾನದ ಮಧ್ಯಭಾಗದಲ್ಲಿ ತಿರುನಲ್ವೇಲಿಯ ಜಿಲ್ಲೆಯ ಮಲೈಯಡಿಕ್ಕುರಿಚಿ ಎಂಬಲ್ಲಿ ಪಾಂಡ್ಯರ ದೊರೆ ಮಾರನ್ ಶೇಂದನ್ ಕಟ್ಟಿಸಿದ ಆಲಯವೇ ಇವುಗಳಲ್ಲಿ ಅತ್ಯಂತ ಪ್ರಾಚೀನವಾದ್ದು. ಪಲ್ಲವರ ಗುಹಾಲಯಗಳಲ್ಲಿದ್ದಂತೆಯೇ ಇವುಗಳಲ್ಲೂ ಒಂದು ಮಂಡಪ, ಹಿಂಭಾಗದಲ್ಲಿ ಒಂದು ಅಥವಾ ಹೆಚ್ಚಿನ ಗುಡಿಗಳು, ಒಮ್ಮೊಮ್ಮೆ ಮಂಡಪದ ಪಕ್ಕದ ಗೋಡೆಗಳಲ್ಲೂ ಇಂಥ ಗುಡಿಗಳು; ಮುಂಭಾಗದಲ್ಲಿ ದೊಡ್ಡ ಗಾತ್ರದ ಕಂಬಗಳು. ಇವುಗಳ ಬುಡ ಹಾಗೂ ಮೇಲಿನ ಭಾಗಗಳೂ ಚೌಕಾಕಾರದವು. ಮಧ್ಯದ ಭಾಗದಲ್ಲಿ ಅಷ್ಟ ಮೂಲೆಗಳಿದ್ದು ಮೇಲ್ಭಾಗದಲ್ಲಿ ನೇರಾದ ಕೋನಮಟ್ಟವನ್ನುಳ್ಳ ಭಾರವಾದ ಬೋದಿಗೆಗಳಿವೆ. ಸ್ವಲ್ಪಮಟ್ಟಿಗೆ ಬಾಗಿದಂತೆ ಪಾಶ್ರ್ವದೃಶ್ಯವುಳ್ಳ. ಅಲಂಕೃತ ಬೋದಿಗೆಗಳುಳ್ಳ ಕಂಬವನ್ನೊಳಗೊಂಡ ಮಾದರಿಗಳು ಕಂಡುಬಂದಿವೆ. ಆದರೆ ಮುಂಭಾಗದ ಮಂಡಪಗಳ ಮೇಲಿನ ಕಮಾನುಗಳಲ್ಲಿ ಸ್ಪಷ್ಟವಾಗಿ ನಿರೂಪಿಸಿದ ಕಪೋತಗಳು ಈ ಗುಹಾಲಯಗಳಲ್ಲಿ ಕಂಡುಬಂದಿಲ್ಲ. ಕೆಲವೊಮ್ಮೆ ಇವುಗಳಿಗೆ ಮಂಡಪಗಳಿಲ್ಲದೆ, ಬಂಡೆಯಲ್ಲಿ ನೇರಾಗಿ ಗುಡಿಗಳಂಥ ಗೂಡುಗಳನ್ನೇ ಕೊರೆಯಲಾಗಿದೆ. ಈ ಪ್ರದೇಶದಲ್ಲಿ ಇಂಥವು ಸಾಮಾನ್ಯ.

ಮಲೈಯಡಿಕ್ಕರಿಚಿಯ ಗುಹಾಲಯ ಹಿಂಬದಿಯಲ್ಲಿ ಗರ್ಭಗುಡಿಗಾಗಿ ಕೊರೆಯಲಾದ ಒಂದೇ ಗೂಡುಳ್ಳ ಮಂಡಪಶೈಲಿಯದು, ಏಳನೆಯ ಶತಮಾನದ ಉತ್ತರಾರ್ಧದಲ್ಲಿ ಸುಮಾರು 657ರಲ್ಲಿ ಕಟ್ಟಲಾದ ಇದನ್ನು ಕಲ್ ತಿರುಕೋಯಿಲ್ ಎಂದು ಶಾಸನದಲ್ಲಿ ಕರೆಯಲಾಗಿದೆ. ರಾಮನಾಥಪುರಂ ಜಿಲ್ಲೆಯ ಪಿಳ್ಳೈಯಾರ್ ಪಟ್ಟಿದಕುನ್ನಕ್ಕುಡಿ (ಮಾಸಿಲೀಶ್ವರ ಎಂದು ಕರೆಯಲಾದ ಶಿವನ ಮೂರನೆಯ ಗುಹಾಲಯ), ಮದುರೈ ಜಿಲ್ಲೆಯ ಅನೈಮಲೈ (770) ಮತ್ತು, ಈಗ ಸುಬ್ರಹ್ಮಣ್ಯನ ದೇವಾಲಯವೆಂದು ಪ್ರಸಿದ್ಧಿ ಪಡೆದ ತಿರುಪ್ಪರನ್‍ಕುನ್ಹಮ್‍ನ ಗುಹಾಲಯ- ಇವು ಪಾಂಡ್ಯರ ಪ್ರಾಚೀನ ಗುಹಾಲಯಗಳಲ್ಲಿ ಪ್ರಮುಖವಾದುವು. ತಿರುವಳ್ಳರೈ ಗುಹಾಲಯ ಅಸಂಪೂರ್ಣವಾದ್ದು. ಪ್ರಧಾನ ದೇವಾಲಯದ ಹೊಸ ಪ್ರಕಾರದ ಹಿಂಬದಿಯಲ್ಲಿರುವ ಕೈಸಾಲೆಯ ಎರಡೂ ಬದಿಗಳಲ್ಲಿ ಗೋಡೆಯಿಂದ ಹೊಮ್ಮಿದಂತೆ ತೋರುವ ಎರಡು ಗುಡಿ-ಗೂಡುಗಳಿವೆ. ಹಿಂಬದಿಯ ಗೋಡೆಯಲ್ಲಿ ಬ್ರಹ್ಮ, ಸ್ಕಂದ ಸೂರ್ಯ, ಗಣೇಶ ಮತ್ತು ದುರ್ಗಾ ಇವರ ಸ್ಥಾನಕವಿಗ್ರಹಗಳನ್ನು ಬೇರೆಬೇರೆಯಾಗಿ ವಿಭಜಿಸಿ ಕೊರೆಯಲಾಗಿದೆ. ಗೋಡೆಯ ಎರಡೂ ತುದಿಗಳಲ್ಲಿ ವಿಷ್ಣು ಹಾಗೂ ಶಿವನಿಗಾಗಿ ಗೂಡುಗಳನ್ನು ಕೊರೆದಂತಿದೆ. ಲಿಂಗವನ್ನು ಪ್ರತಿಷ್ಠಿಸಲು ಯಾವ ಪ್ರತ್ಯೇಕ ಏರ್ಪಾಡುಗಳನ್ನೂ ಇವುಗಳಲ್ಲಿ ಮಾಡಿಲ್ಲ. ಮೂಲ ಕಲ್ಲಿನಲ್ಲೇ ಲಿಂಗವನ್ನೂ ಪೀಠವನ್ನೂ ಕೊರೆಯುವುದು ಇವರ ಶೈಲಿಯ ವೈಶಿಷ್ಟ್ಯವಾಗಿತ್ತು. ಆದರೆ ಮಲೈಯಡಿಕ್ಕುರಿಚಿಯಲ್ಲಿ ಸಣ್ಣ ಪ್ರತ್ಯೇಕವಾದ ಲಿಂಗ ಮತ್ತು ಪೀಠವಿರುವುದು ಗಮನಾರ್ಹ. ಮೂಲತಃ ಈ ಗುಡಿಯಲ್ಲಿ ಲಿಂಗಪ್ರತಿಷ್ಠಾಪನೆಗೆ ಯಾವ ಸಿದ್ಧತೆಯನ್ನೂ ಮಾಡಿರಲಿಲ್ಲ. ಅನಂತರದ ಕಾಲದಲ್ಲಿ ಪೀಠಸಹಿತ ಲಿಂಗವನ್ನು ಪ್ರತಿಷ್ಠಾಪಿಸಿರಬಹುದಾಗಿದೆ. ಇದರಿಂದ ಪಾಂಡ್ಯರ ಪ್ರಾಚೀನ ಗುಹಾಲಯಗಳಲ್ಲಿ ಎರಡು ವಿಭಿನ್ನ ಪದ್ಧತಿಗಳನ್ನು ಗುರುತಿಸಬಹುದೆಂದು ಕೆಲವರು ಸೂಚಿಸಿದ್ದಾರೆ. ಮಂಟಪದ ಶೈಲಿಯ ಗುಹಾಲಯಗಳಲ್ಲಿ ಮುಂಭಾಗದ ಕಂಬಗಳು ಬುಡದಲ್ಲಿ ಹಾಗೂ ಮೇಲ್ಭಾಗದಲ್ಲಿ ಘನಾಕೃತಿಯನ್ನು ಪಡೆದಿದ್ದು ಮಧ್ಯದ ಭಾಗ ಕೋನಗಳಲ್ಲಿರುವುದು ಸಾಮಾನ್ಯ ಲಕ್ಷಣ. ಆದರೆ ಇದರಲ್ಲೂ ವಿಭಿನ್ನತೆಗಳು ಕಂಡುಬಂದಿವೆ. ಕುಡುಮಿಯಾ ಮಲೆಯ ಮೇಲೈಕೋವಿಲ್‍ನಲ್ಲಿ ಮುಂಭಾಗದ ಕಂಬಗಳ ಮೇಲೆ ಕಲಶ, ಕುಂಭ ಇತ್ಯಾದಿಗಳನ್ನು ಕೊರೆದು ತೋರಿಸಲಾಗಿದೆ. ಮಲೈಯಡಿಪಟ್ಟಿಯಲ್ಲಿ ಕಂಬಗಳ ಕೆಳಭಾಗಗಳನ್ನು ಮುಂಗಾಲನ್ನೂ ಚಾಚಿ ಕುಳಿತ ಸಿಂಹಗಳಂತೆ ತೋರಿಸಲಾಗಿದೆ. ತಮಿಳು ನಾಡಿನಲ್ಲಿ- ಅದರಲ್ಲೂ ತೊಂಡೈಮಂಡಲಮ್ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಗಣೇಶ, ಸಪ್ತಮಾತೃಕೆ ಮತ್ತು ಜ್ಯೇಷ್ಠಾದೇವಿಗಳ ವಿಗ್ರಹಗಳನ್ನು ಪಾಂಡ್ಯರ ಗುಹಾಲಯಗಳಲ್ಲಿ ನೋಡಬಹುದು. ಈ ದೇವತೆಗಳ ಕಲ್ಪನೆ ಮೂಲತಃ ಚಾಲುಕ್ಯರದಾಗಿದ್ದು, ಗಂಗವಾಡಿಯ ಮೂಲಕ ಪಾಂಡ್ಯನಾಡಿಗೆ ಬಂದಿದೆ ಎಂದು ಭಾವಿಸಲಾಗಿದೆ. ಸಾಮಾನ್ಯವಾಗಿ ಶಿವಾಲಯಗಳಲ್ಲಿ ಕಲ್ಲಿನಲ್ಲೇ ಕೊರೆದ ಲಿಂಗ ಹಾಗೂ ಪೀಠಗಳು ಈ ಕಾಲದ ವೈಶಿಷ್ಟ್ಯವಾದರೂ ಹಿಂಬದಿಯ ಗೋಡೆಯಲ್ಲಿ ಈ ದೇವರ ಉಬ್ಬುಶಿಲ್ಪಗಳನ್ನು ಕಾಣಬಹುದಾಗಿದೆ. ಗರ್ಭಗುಡಿಯಲ್ಲಿ ಲಿಂಗಪೀಠದ ಮುಂಚಾಚಿದ ನಳಿಕೆಗಳ ಕೆಳಗೆ ನೆಲದಲ್ಲಿ ಅಭಿಷೇಕಜಲವನ್ನು ಹಿಡಿಯಲು ಸಣ್ಣದೊಂದು ಗುಂಡಿಯನ್ನು ತೋಡಿರುವುದು ಇನ್ನೊಂದು ವೈಶಿಷ್ಟ್ಯ.

ಕುಡುಮಿಯಾಮಲೈ, ತಿರುಮಯಮ್ (ಸತ್ಯಗಿರೀಶ್ವರ), ಮಲಯಕ್ಕೋಯಿಲ್ ಮತ್ತು ತಿರುಗೋಕಣ್ರ್ನಗಳಲ್ಲಿರುವ ಗುಹಾಲಯಗಳೆಲ್ಲಾ ಒಂದೇ ಕಾಲದವು. ಅಲ್ಲಲ್ಲಿ ಸಂಗೀತದ ಸ್ವರಗಳಿಗೆ ಸಂಬಂಧಿಸಿದ ಶಾಸನಗಳಿವೆ. ಕುಡುಮಿಯಾಮಲೈ ಶಾಸನ ಪೂರ್ಣವಾಗಿ ಉಳಿದುಬಂದಿದೆ. ಇದರ ಪ್ರತಿಗಳು ಸ್ವಲ್ಪಮಟ್ಟಿಗೆ ಉಳಿದ ಕಡೆಗಳಲ್ಲಿವೆ. ಇವುಗಳೆಲ್ಲೆಲ್ಲ, ಬಹುಶಃ ಸಂಕೇತಪಥದಂತೆ, ಪರಿವಾದಿನಿಯೆ ಎಂಬ ಪದ ಕಾಣಿಸಿದ್ದು ಇದು ಗುಣಸೇನನೆಂಬಾತ ರೂಪಿಸಿದ ವಿದ್ಯಾಪರಿವಾದಿನಿ ಎಂಬ ಒಂದು ತಂತಿವಾದ್ಯದ ಹೆಸರಾಗಿದೆ. ಇದಕ್ಕೆ ಸಂಬಂದಿಸಿದ ಸ್ವರಪ್ರಸ್ತಾರಗಳನ್ನೂ ಅರಸನೊಬ್ಬ ಪ್ರಚಾರಕ್ಕಾಗಿ ಶಾಸನಸ್ಥಗೊಳಿಸಿದ. ಈ ಅರಸ ರುದ್ರಾಚಾರ್ಯ ಎಂಬ ಶೈವಗುರುವಿನ ಶಿಷ್ಯನಾಗಿದ್ದ. ತಿರುಮಯಮ್, ತಿರುಗೋಕಣ್ರ್ನ, ಮಲಯಕ್ಕೋಯಿಲ್‍ಗಳಲ್ಲಿನ ಶಿವಾಲಯಗಳಲ್ಲಿ ಏಕಶಿಲೆಯ ಲಿಂಗಪೀಠಗಳಿವೆ. ಇವು ಕ್ರಮವಾಗಿ ದುಂಡುಚೌಕ ಮತ್ತು ಅಷ್ಟಕೋನ ಆಕಾರಗಳನ್ನು ಪಡೆದಿವೆ. ಇವುಗಳಲ್ಲಿ ಚೌಕ ಮತ್ತು ಅಷ್ಟಕೋನಾಕಾರದ ಲಿಂಗಗಳು ದುಂಡುಲಿಂಗಗಳಿಗಿಂತ ಪ್ರಾಚೀನ.

ಪಾಂಡ್ಯರ ಈ ಗುಹಾವಾಸ್ತುಶಿಲ್ಪ ಪಲ್ಲವರ ವಾಸ್ತುಶಿಲ್ಪಕ್ಕಿಂತ ಭಿನ್ನವಾಗಿರುವುದಲ್ಲದೆ ಚಾಲುಕ್ಯಶೈಲಿಯಿಂದ ಪ್ರಭಾವಿತವಾಗಿದೆ ಎಂಬುದನ್ನು ಈ ಗುಹಾಲಯಗಳಲ್ಲಿನ ಕಂಬಗಳು, ಮಹಾಮಂಡಪದ ಪಕ್ಕದ ಗೋಡೆಗಳಲ್ಲಿನ ಗೂಡುಗಳು. ಗರ್ಭಗುಡಿಯಲ್ಲಿ ಸೋಮಸ್ಕಂದಕ್ಕೆ ಬದಲಾದ ವಿಭಿನ್ನ ಆಕಾರಗಳ ಲಿಂಗಪೀಠಗಳು, ಏಕಶಿಲೆಯ ಲಿಂಗಗಳು, ಉಬ್ಬು ಶಿಲ್ಪಗಳು, ಮೂಲವಿಗ್ರಹದ ಜೊತೆಗೆ ಗಣೇಶ, ಜ್ಯೇಷ್ಠಾ, ಸಪ್ತಮಾತೃಕೆಗಳಿಗಾಗಿ ಒಮ್ಮೊಮ್ಮೆ ಗುಹೆಯ ಹೊರ ಆವರಣದಲ್ಲಿ ಪ್ರತ್ಯೇಕವಾದ ಗುಡಿಗಳು- ಇವು ಸೂಚಿಸುತ್ತವೆ.

ಗಟ್ಟಿಯಾದ ಗ್ರಾನೈಟ್ ಶಿಲೆಗಳನ್ನು ಬಳಸಿ, ಚಿಕ್ಕದಾದರೂ ಚೊಕ್ಕದಾದ ವಿಮಾನಗಳನ್ನು ಕಟ್ಟಿಸಿದ ಹಿರಿಮೆ ಪಾಂಡ್ಯರದು. ಅವರ ಗುಹಾಲಯಗಳ ಶೈಲಿಯನ್ನನುಸರಿಸಿ ಕಳುಗುಮಲೈಯಲ್ಲಿ ವೆಟ್ಟುವನ್‍ಕೋವಿಲ್‍ನ ಏಕಶಿಲೆಯ ವಿಮಾನವನ್ನು ಸುಮಾರು 800ರಲ್ಲಿ ಅವರು ಕಟ್ಟಿಸಿದರು. ಎರಡು ಮೀಟರುಗಳಿಗಿಂತ ಕಡಿಮೆ ಅಗಲದ, ಚೌಕವಾದ ಬುಡವುಳ್ಳ, ಸರಳವಾದ ಅಲಂಕೃತ ಅಧಿಷ್ಠಾನ ಹೊಂದಿದ, ಚೌಕಾಕಾರದ ಏಕತಲ ವಿಮಾನದ ಕಲ್ಲಿನ ದೇವಾಲಯಗಳೂ ತಿರುಚಿನಾಪಳ್ಳಿ ಜಿಲ್ಲೆಯ ಕರಿಯಪಟ್ಟಿ, ತಿರುಪ್ಪೂರ್, ವೀಶಲೂರು ಮತ್ತು ಪನಂಗುಡಿಗಳಲ್ಲಿ ಕಾಣಬಹುದು. ಇವುಗಳ ಗರ್ಭಗುಡಿಯ ಮೇಲೆ ಚೌಕಾಕಾರದ ಗ್ರೀವ ಮತ್ತು ಶಿಖರಗಳಿವೆ. ಇವುಗಳ ಗೋಡೆಯ ಗೂಡುಗಳಲ್ಲಿ, ವಿಮಾನದ ಗೂಡುಗಳಲ್ಲಿ ಗಣೇಶ, ದುರ್ಗಾ, ದಕ್ಷಿಣಾಮೂರ್ತಿ, ವಿಷ್ಣು ಮತ್ತು ಬ್ರಹ್ಮರ ಉಬ್ಬುಶಿಲ್ಪಗಳಿರುವುದಲ್ಲದೆ ಸಪ್ತಮಾತೃಕೆಗಳಿಗೂ ಇತರ ಪರಿವಾರ ದೇವತೆಗಳಿಗೂ ಪ್ರತ್ಯೇಕವಾದ ಚೌಕಾಕಾರದ ಗುಡಿಗಳನ್ನೂ ಕಟ್ಟಿಸುವುದು ಇವರ ಶೈಲಿಯ ಒಂದು ಲಕ್ಷಣವಾಯಿತು.

10-11ನೆಯ ಶತಮಾನಗಳ ಬಳಿಕ ಇವರದೇ ಆದ ವಿಶಿಷ್ಟ ಶೈಲಿಯನ್ನು ವಿಸ್ತಾರವಾದ ಮಂಡಪಗಳಲ್ಲಿ ಗುರುತಿಸಬಹುದಾಗಿದೆ.
(ಜಿ.ಬಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ